Sunday, May 24, 2020

ಚಾರುಲತಾ ಎಂಬ ದೃಶ್ಯಕಾವ್ಯ


ನಾನು ನೋಡಿದ ಚಿತ್ರ
ಚಿತ್ರ: ಚಾರುಲತಾ
ವರ್ಷ: ೧೯೬೪
ಕತೆ: ರವೀಂದ್ರನಾಥ ಟ್ಯಾಗೋರ್
ನಿರ್ದೇಶನ: ಸತ್ಯಜಿತ್ ರೇ

ಪತ್ರಿಕೆಯೊಂದರ ವಿಚಾರವಾದಿ ಮಾಲೀಕ, ಬಹುತೇಕ ಒಂಟಿಯಾಗಿಯೇ ಇರುವ ಅವನ ಪತ್ನಿ, ಅವಳ ಅಭಿರುಚಿಗೆ ತಕ್ಕನಾದ ಪತಿಯ ತಮ್ಮ- ಇವರು ಮೂರು ಜನರ ನಡುವಿನ ಸೂಕ್ಷ್ಮ ಸಂಬಂಧದ ಸುಂದರ ಕಾವ್ಯ ಈ ಚಿತ್ರ "ಚಾರುಲತಾ" .
ತನ್ನದೇ ವಿಚಾರದಲ್ಲಿ ಮುಳುಗಿದ ಗಂಡ ತನ್ನ ಕಡೆ, ತನ್ನ ಅಭಿರುಚಿಯ ಕಡೆ, ತನ್ನ ಕಲೆಯ ಕಡೆ, ತನ್ನ ಸೃಜನಶೀಲತೆಯ ಕಡೆ ತೋರುವ ನಿರ್ಲಕ್ಷ್ಯ, ಆಲಕ್ಷ್ಯದಿಂದ ಆರಂಭವಾಗುವ ಚಿತ್ರ, ಪತ್ನಿ ನೀಡಿದ ಕೈಯತ್ತ ತನ್ನ ಕೈ ಚಾಚುವ ಸಾಂಕೇತಿಕ ದೃಶ್ಯದೊಂದಿಗೆ ಮುಗಿಯುತ್ತದೆ ಚಿತ್ರ.  ಎಂಥದೇ ಉನ್ನತ ವಿಚಾರಗಳಿರುವ ಪತಿಗೆ,  ಜೀವನ ಹಂಚಿಕೊಳ್ಳಲು ಬಂದ ಪತ್ನಿಯ ಅಭಿರುಚಿಗೆ ಅನುಗುಣವಾಗಿ ನಡೆದುಕೊಳ್ಳಬೇಕಾದ ಪತಿಯ ಧರ್ಮ, ಎಂಥದೇ ರಮ್ಯ ಭಾವನೆಗಳು ಇದ್ದರೂ, ಜೀವನ ಹಂಚಿಕೊಳ್ಳುವ ಪತಿಯ ವ್ಯವಹಾರಗಳಲ್ಲಿ ಸಮನಾಗಿ ತೊಡಗಿಸಿಕೊಳ್ಳಬೇಕಾದ ಪತ್ನಿಯ ಧರ್ಮ ಎರಡನ್ನೂ ಅದೆಷ್ಟು ಸಮಭಾಗ  (symmetric) ವಾಗಿ ನಿರ್ದೇಶಕರು ಚಿತ್ರಿಸಿದ್ದಾರೆ ಎಂದರೆ ಚಿತ್ರಪ್ರೇಮಿಗಳು ಇದನ್ನು ಇಷ್ಟ ಪಡದಿರಲು ಸಾಧ್ಯವೇ ಇಲ್ಲ.
ಆದರೆ ಹೆಚ್ಚು ವಿಮರ್ಶೆ, ಚರ್ಚೆಗಳು ಈ ಆರಂಭ ಮತ್ತು ಅಂತ್ಯದ ನಡುವಿನ ಗೃಹಭಂಗದ ಕಥೆಯ ಸುತ್ತ, ದಂಪತಿಗಳ ನಡುವಿನ ದೂರದ ತೀರಗಳನ್ನು ಸೇರಿಸುವ ತಂಪು ಸರಿತೆಯಂತಹ ಮೂರನೇ ವ್ಯಕ್ತಿ ಅಮೋಲ್,  ಚಾರುಲತಾಳ ಮೈದುನ.
ಇಡೀ ಚಿತ್ರ ನಾಯಕಿ ಚಾರುಲತಾ ಳ ಸುತ್ತ ಮಾತ್ರವಲ್ಲ, ಅವಳ ದುರ್ಬೀನು ಮೂಲಕ ನೋಡುವ ಕಣ್ಣುಗಳ ಮೂಲಕವೇ ಸಮರ್ಥವಾಗಿ ಚಿತ್ರಿತವಾಗಿದೆ. ಒಂದು ದೃಶ್ಯದಲ್ಲಿ ತನ್ನ ಕೋಣೆಯ ಎಲ್ಲ ಕಿಟಕಿಗಳ ಮೂಲಕ ಬೀದಿಯಲ್ಲಿ ನಡೆದು ಹೋಗುವ ಒಬ್ಬ ವ್ಯಕ್ತಿಯನ್ನು ಅನುಸರಿಸಿ ಹೋಗುವ ಚಾರುಲತಾ ಳ ಆಟವಿದೆ. ಇನ್ನೊಂದು ದೃಶ್ಯದಲ್ಲಿ, ಕೋಣೆಯ ಬಾಗಿಲಲ್ಲಿ ನಿಂತ ಅವಳನ್ನು ಗಮನಿಸದೇ ಪತ್ರಿಕೆಯಲ್ಲಿ ಮುಳುಗಿ ಅವಳ ಪಕ್ಕದಲ್ಲೆ ಕಾರಿಡಾರಿನಲ್ಲಿ ನಡೆದು ದೂರ ಹೋಗುವ ಗಂಡನ ನ್ನೂ ಅದೇ ದುರ್ಬೀನಿನಲ್ಲಿ ನೋಡುವ ದೃಶ್ಯವಿದೆ. ಹೂದೋಟದಲ್ಲಿ ಜೋಕಾಲಿಯ ಮೇಲೆ ಕುಳಿತು ಕೆಳಗೆ ಮಲಗಿ ಶಿಶಿರದ ರಾತ್ರಿಯ ಬಗ್ಗೆ ಕವನ ಬರೆಯುತ್ತಿರುವ ಮೈದುನನನ್ನು ಹತ್ತಿರದಲ್ಲಿದ್ದ ರೂ ದುರ್ಬೀನಿನ ಮೂಲಕ ನೋಡುವ ಚಾರುಲತಾ ಳ ದೃಶ್ಯವಿದೆ. ಚಿತ್ರದ ಅಂತಿಮ ಹಂತದಲ್ಲಿ ಇಬ್ಬರು ವ್ಯಕ್ತಿಗಳು ಸಮುದ್ರದಲ್ಲಿ ದೋಣಿಯ ಮೇಲೆ ಸಾಗಿ ಹೋಗುತ್ತಿರುವ ದೃಶ್ಯವನ್ನು ಚಾರುಲತಾ ತನ್ನ ದುರ್ಬೀನಿನಲ್ಲಿ ಗಂಡನ ಪಕ್ಕ  ತೀರದಲ್ಲಿ ಕುಳಿತು ನೋಡುವ ದೃಶ್ಯವಿದೆ.
ಈ ನಾಲ್ಕೂ ದೃಶ್ಯಗಳೂ ಸಾಂಕೇತಿಕವಾಗಿ  ಚಿತ್ರಕತೆ ಬೆಳೆಯುವ ರೀತಿಯನ್ನು ಧ್ವನಿಪೂರ್ಣವಾಗಿ ಅಭಿವ್ಯಕ್ತಿಸಿವೆ.
ಪತಿಯು ವ್ಯವಹಾರದಲ್ಲಿ ತನಗೆ ಆಗಿರುವ ದ್ರೋಹವನ್ನು ಕುರಿತು ಮಾತನಾಡಿದಾಗ ಅದನ್ನು ಕೇಳಿಸಿಕೊಂಡ ಅವನ ತಮ್ಮ ತಾನು ಅವರ ಸಂಸಾರದಲ್ಲಿ ತಾನು ತಂದಿರುವ ಬಿರುಕಿನ ಬಗ್ಗೆ ಪಶ್ಚಾತಾಪ ಉಂಟಾಗುವಂತೆ ಮಾಡುವ ದೃಶ್ಯವನ್ನು ತುಂಬಾ ಪರಿಣಾಮಕಾರಿಯಾಗಿ ಮೂಡಿಬಂದಿದೆ.
ಸಂದರ್ಭದ ಶಿಶುಗಳಾಗಿ ತಮ್ಮದೇ ಲಹರಿಯಲ್ಲಿ ತೇಲಿಹೋದವರಿಗೆ,  ತಾವು ಮಾಡುತ್ತಿರುವ ತಪ್ಪು ಎಂಥದೆಂದು ಯಾರಿಗೆ ತಾನೇ ತಕ್ಷಣ ಗೊತ್ತಾಗುತ್ತದೆ?
ಇಲ್ಲಿನ ಮೂರು ಪಾತ್ರಗಳೂ ತಾವು ಮಾಡುತ್ತಿರುವ ಇಂತಹ ತಪ್ಪಿನ ಬಗ್ಗೆ ಸಮವಾಗಿ ಪಶ್ಚಾತಾಪ ಪಟ್ಟು ತಮ್ಮನ್ನು ತಾವು ತಿದ್ದಿಕೊಳ್ಳುವ ಬಗೆಯೇ ಅತ್ಯಂತ ಪ್ರಶಂಸಾರ್ಹವಾಗಿರುವುದು.
ಇದೇ ಕತೆ ಸಾಮಾನ್ಯ ನಿರ್ದೇಶಕರೊಬ್ಬರಿಗೆ ಸಿಕ್ಕಿದ್ದರೆ ಅದೆಷ್ಟು ಮೆಲೋಡ್ರಾಮಾ, ಮಾತುಗಳನ್ನು ತುಂಬಿ ಈ ಚಿತ್ರವನ್ನು ನಿರ್ಮಿಸಿ ಬಿಡುತ್ತಿದ್ದರೋ... ಇಲ್ಲಿ ಕನಿಷ್ಠ ಮಾತುಗಳ ಮೂಲಕ, ಕಣ್ಣೋಟಗಳ ಮೂಲಕ, ಚಲನವಲನಗಳ ಮೂಲಕ, ಆಗಬೇಕಾದ ಬಹುತೇಕ ಸಂಭಾಷಣೆಗಳನ್ನು ಪ್ರೇಕ್ಷಕರ ಮನಸ್ಸಿಗೇ ಬಿಟ್ಟುಬಿಡುತ್ತಾರೆ ಸತ್ಯಜಿತ್ ರೇ.

ದೃಶ್ಯಕಾವ್ಯದ ಮೋಡಿ ಎಂತದೆಂದು ನಿಮಗೆ ಈ ಚಿತ್ರದ ಮೂಲಕ ಅರ್ಥವಾದೀತು.
ಈಗ ಗುರುದೇವ ರ ಕಥೆಯನ್ನೂ ಹುಡುಕಿ ಓದಬೇಕು.  ಆಗ ಕತೆಗಾರ ಮತ್ತು ನಿರ್ದೇಶಕ ಇಬ್ಬರ ಪ್ರತಿಭೆಗಳ ಪರಿಚಯ ವಾಗುತ್ತದೆ.
- ಡಾ. ನವೀನ್ ಹಳೆಮನೆ

No comments: