Thursday, May 14, 2020

ಡೋಲಿನ ಸದ್ದಿಗೆ ಬದಲಾದ ಬದುಕು

ನಾನು ನೋಡಿದ ಚಿತ್ರ
ಚಿತ್ರ: ಹೆಲ್ಲರೋ
ಭಾಷೆ: ಗುಜರಾತಿ
ವರ್ಷ: 2019
ನಿರ್ದೇಶನ: ಅಭಿಷೇಕ್ ಶಾ

ಅಪ್ಪ ಖಡ್ಗವನ್ನು ತಯಾರಿ ಮಾಡಿಕೊಂಡು ಗಾರ್ಬ ನೃತ್ಯಕ್ಕೆ ಮಗನೊಂದಿಗೆ ಹೋಗಲು ಸಿದ್ಧನಾಗುತ್ತಾನೆ. ಮಗಳು ನಾನೂ ಬರ್ತೀನಿ. ಎಂದರೆ ಅವಳತ್ತ ತಿರುಗಿ ಹೂಂಕರಿಸುತ್ತಾನೆ ಅಪ್ಪ. ಹೆಣ್ಣು ಮಕ್ಕಳು ಅಲ್ಲಿಗೆ ಹೋಗುವಂತಿಲ್ಲ ಎಂದು ಅಮ್ಮ ಸಮಾಧಾನ ಮಾಡುತ್ತಾಳೆ. ಯಾಕೆ? - ಪುಟ್ಟ ಮಗಳ ಪ್ರಶ್ನೆ.
ಹೆಣ್ಣು ಮಕ್ಕಳು ಪ್ರಶ್ನೆಯನ್ನೂ ಕೇಳಬಾರದು... ಎಂದು ಹೊರಡುತ್ತಾನೆ.
ಇದು ಮೊದಲ ದೃಶ್ಯ. ಆ ಮೂಲಕ ಇಡೀ ವಾತಾವರಣವನ್ನು, ಮನೋಸ್ಥಿತಿಯನ್ನು ನಿರ್ದೇಶಕ ಕಟ್ಟಿ ಕೊಡುತ್ತಾನೆ.
ಪಟ್ಟಣದಲ್ಲಿ ಬೆಳೆದು 7ನೇ ತರಗತಿಯವರೆಗೆ ಓದಿದ ಒಬ್ಬ ಹುಡುಗಿ ಮಂಜರಿ ಮದುವೆಯಾಗಿ ಕಛ್ ನ ಒಂದು ಹಳ್ಳಿಗೆ ಬಂದು ಸೇರುತ್ತಾಳೆ. ಕಣ್ಣು ಹಾಯಿಸಿದಷ್ಟೂ ದೂರ ಬರೀ ಬರಡು ನೆಲ. ನಡುವೆ ಗುಡಿಸಲುಗಳು. ಮುಸುಕು ಹಾಕಿ ಕೊಂಡು ಲೋಹದ ಬಿಂದಿಗೆಗಳನ್ನು ಹಿಡಿದು ನೀರಿಗೆ ಹೋಗುವ ಸುಮಾರು 15 ರಿಂದ 20 ಹೆಂಗಸರು. ಅವರ ಗುಡಿಸಲುಗಳಲ್ಲಿ ಗಂಡಸರದೇ ಅಧಿಕಾರ, ನಿಯಮಗಳು, ದರ್ಪ. ಹೆಂಗಸರು ನಗುವುದು ನಿಷಿದ್ಧವೇನೋ ಎಂಬಂತೆ ಉಸಿರುಕಟ್ಟುವ ವಾತಾವರಣ. ಇದರಿಂದ ಹೆಂಗಸರ ತಾತ್ಕಾಲಿಕ ಬಿಡುಗಡೆ ನೀರು ತರಲು ಹೋಗುವ ಬರುವ ದಾರಿಯ ಮಾತುಗಳು.
*ನೀನು ಏನು ಓದಿದ್ದೀಯ?*
"ಸ್ವಲ್ಪ"
"ಹೌದಾ, ಹಾಗಾದರೆ ಏನಾದರೂ ಓದಿ ತೋರಿಸು. ಹೆಂಗಸರು ಓದುವುದನ್ನು ನೋಡಲು ಚೆಂದ"
"ಓದೋಕೆ ಇಲ್ಲೇನು ಬೋರ್ಡುಗಳು ಇವೆಯ?"
"ಅವಳ ಜೊತೆ ಮಾತಾಡಬೇಡ. ಅವಳು ವಿಧವೆ. ಒಂದೂವರೆ ವರ್ಷದ ನಂತರ ಗೃಹಬಂಧನದಿಂದ ಇವತ್ತೇ ಆಚೆ ಬಂದಿದ್ದಾಳೆ. ಗಂಡಸರು ಹಾಗೆಂದು ನಿಯಮ ಮಾಡಿದ್ದಾರೆ"
ಇಂತಹ ಸಂಭಾಷಣೆಗಳ ಮೂಲಕ ಗುಜರಾತಿನ ಕಛ್ ಬಳಿಯ ಹಾಡಿಯ ಎಲ್ಲಾ ರೀತಿ ರಿವಾಜುಗಳನ್ನು ನಿರ್ದೇಶಕ ಕಾಯಿ ಕೊಡುತ್ತಾನೆ.
ಅವರ ದಾರಿಯಲ್ಲಿ ಒಂದು ದಿನ ಒಬ್ಬ ಅಪರಿಚಿತ ಗಂಡಸು ಬಾಯಾರಿಕೆಯಿಂದ ಮೂರ್ಛೆ ಬಿದ್ದಿದ್ದಾನೆ. ಎಲ್ಲರ ಹುಬ್ಬೇರಿಸುವಂತೆ ಪಟ್ಟಣದ ಹುಡುಗಿ ಅವನಿಗೆ ಕುಡಿಯಲು ನೀರು ಕೊಡುತ್ತಾಳೆ. ಸತ್ತೆ ಹೋಗುತ್ತಿದ್ದವನು ಬದುಕಿ ಎದ್ದು ನಿಂತಾಗ ಅವನ ಬಳಿ ಡೋಲು ಕಾಣಿಸುತ್ತದೆ. ಒಮ್ಮೆ ಅದನ್ನು ಬಡಿದು ತೋರಿಸು ಎನ್ನುತ್ತಾಳೆ ಮಂಜರಿ.
ಅವನು ಜೀವ ಉಳಿಸಿದ ಹೆಣ್ಣಿಗಾಗಿ ಕೃತಜ್ಞತೆಯಿಂದ  ಅವರತ್ತ ಬೆನ್ನು ಮಾಡಿ ಬಡಿಯಲು ಆರಂಭಿಸುತ್ತಾನೆ. ಮೊದಲು ಮಂಜರಿ ನಂತರ ಉಳಿದವರು ನಿಧಾನವಾಗಿ ಹೆಜ್ಜೆ ಹಾಕಿ ನೃತ್ಯ ಮಾಡಲು ಆರಂಭಿಸುತ್ತಾರೆ.
ಅಲ್ಲಿಂದ ಆ ಹೆಂಗಸರ ಜೀವನ ಗತಿಯೇ ಬದಲಾಗುತ್ತದೆ. Hellaro ಎಂದರೆ ಆಸ್ಫೋಟ. 
ಇನ್ನು ಪ್ರತಿದಿನವೂ ಹೆಂಗಸರು ನೀರು ತರಲು ಹೋಗುವ ಆ ಸಮಯಕ್ಕೆ ಖುಷಿಯಿಂದ ಕಾಯಲು ಆರಂಭಿಸುತ್ತಾರೆ. ಆ ಹೆಂಗಸರಲ್ಲಿ ತಾವು ಮಾಡುತ್ತಿರುವುದು ಪಾಪ ಕೃತ್ಯ. ಇದರ ಪರಿಣಾಮ ಯಾರ ಮೇಲೆ ಏನಾಗುತ್ತದೋ ಎಂದು ಭಯಬೀತರಾಗಿಯೆ ಗುಟ್ಟಾಗಿಯೇ ಮುಂದುವರಿಯುತ್ತಾರೆ.
ಈ ವಿಷಯ ಹಳ್ಳಿಯ ಗಂಡಸರಿಗೆ ಗೊತ್ತಾಗುತ್ತದೆ. ಮುಂದೆ?
ಎರಡು ಗಂಟೆಗಳ ಕಾಲ ನಿಮ್ಮನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ ಈ ಚಿತ್ರ.
ಇದೊಂದು ಜನಪದ ಕಥೆ ಆಧಾರಿತ ೧೯೭೫ ರಲ್ಲಿ ನಡೆಯುವ ಚಿತ್ರ. ಅರ್ಥಪೂರ್ಣ ಹಾಡುಗಳು, ಜಾನಪದ ಮತ್ತು ಮಣ್ಣಿನ ಸೊಗಡಿನೊಂದಿಗೆ ಅದ್ಭುತವಾಗಿ ಮೂಡಿ ಬಂದಿವೆ. ನೃತ್ಯ ದ  ದೃಶ್ಯಗಳು, ಬರಡು ಭೂಮಿಯ ನಡುವೆ ಹೂವುಗಳು ಅರಳಿದಂತೆ ಕಾಣುವ ಹಾಗೆ ಚಿತ್ರೀಕರಣದ ಕೈ ಚಳಕ ವಿದೆ.
ಮೈ ನವಿರೇಳಿಸುವ ಡೊಳ್ಳಿನ ಸದ್ದು ಚಿತ್ರದುದ್ದಕ್ಕೂ ನಮಗೆ ಸಿಗುತ್ತದೆ.

ನೆನಪಿರಲಿ, ಇದು ಅಭಿಷೇಕ್ ಶಾ ನ ಮೊದಲ ನಿರ್ದೇಶನದ ಚಿತ್ರ. ಅದಕ್ಕೂ ಮಿಗಿಲಾಗಿ ಅತ್ಯುತ್ತಮ ಚಿತ್ರ ಎಂದು ರಾಷ್ಟ್ರ ಪ್ರಶಸ್ತಿ ಗಳಿಸಿದ ಗುಜರಾತಿನ ಮೊದಲ ಚಿತ್ರ...

ಈ ಚಿತ್ರ ನಿಮ್ಮ ಚೈತನ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು ಖಚಿತ.

- ಡಾ. ನವೀನ್ ಹಳೇಮನೆ

No comments: