
ನಾನು ನನ್ನಕ್ಕನನ್ನು ಕಳೆದುಕೊಂಡಿದ್ದೇನೆ.
"ಒಳ್ಳೆಯ ಅಳಿಯ ನಿಮಗೆ ಸಿಕ್ಕರೆ ನಿಮಗೆ ಮಗನೊಬ್ಬ ಸಿಕ್ಕಿದಂತೆ, ಇಲ್ಲದಿದ್ದರೆ ಮಗಳೊಬ್ಬಳನ್ನು ಕಳೆದುಕೊಂಡಂತೆ..." ಎಂಬ ಮಾತಿದೆ. ನನ್ನ ಭಾವ ಅಂಥ ಮಗನಾಗಿದ್ದವರು, ಈಗ ನನ್ನಕ್ಕನನ್ನು ಕಳೆದುಕೊಂಡು ಮಗನಂತಿದ್ದ ನನ್ನ ಭಾವನೂ ಮಂಕಾಗಿದ್ದಾರೆ. ಚೈತನ್ಯದ ಚಿಲುಮೆಯಾಗಿದ್ದ ಮಕ್ಕಳಾದ ಸಿಂಧು(೧೪) ಮತ್ತು ಬಿಂದು(೧೧) ಮಾತ್ರ ಮನೆಯಲ್ಲಿನ ಜವಾಬ್ದಾರಿಯನ್ನು ಹೊರಬೇಕಾದ ಹೆಣ್ಣು ಜೀವಗಳಾಗಿದ್ದಾರೆ.
ನನ್ನ ತಂದೆಯ ಕುಟುಂಬದಲ್ಲಾಗಲೇ, ತಾಯಿಯ ಕುಟುಂಬದಲ್ಲಾಗಲೀ ಅಕಾಲ ಮೃತ್ಯುವನ್ನು ನಾವು ಕಂಡವರೇ ಅಲ್ಲ.
ಈಗ ಸಂಬಂಧಿಕರು ಸಮಾಧಾನ ಮಾಡುವಾಗ, "ನಾವು ಎಲ್ಲದಕ್ಕೂ ರೆಡಿಯಾಗಿರಬೇಕು ಅನ್ನೋದು ಈಗ ಗೊತ್ತಾಗುತ್ತಿದೆ." ಅನ್ನುತ್ತಿದ್ದಾರೆ.
ಮನುಷ್ಯನ ನೆನಪಿನ ಶಕ್ತಿ ಬಹಳವೇ ದುರ್ಬಲವಾದದ್ದು. ಸಾವಿನ ಮನೆಗಳಲ್ಲಿ ಮಾತ್ರ "ಎಲ್ಲಾ ಇಷ್ಟೆ. ಇರುವಷ್ಟು ದಿನ ಚೆನ್ನಾಗಿರಬೇಕು. ಯಾವಾಗ ಏನು ಅಂತ ಗೊತ್ತಾಗೋಲ್ಲ" ಅಂತಾರೆ. ಇನ್ನು ನಾಲ್ಕು ದಿನಕ್ಕೆ ಎಂದಿನ ಇಲಿ ಓಟದಲ್ಲಿ ತೊಡಗುತ್ತಾರೆ ಎಲ್ಲ ಧಾವಂತಗಳ ನಡುವೆ.
ಎಲ್ಲ ಸಾವಿನ ಮನೆಗಳಲ್ಲಿ ಹಾಜರಿದ್ದು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದ ನನ್ನಮ್ಮ ಎಲ್ಲ...ದರಲ್ಲಿ ಆಸಕ್ತಿ ಕಳೆದುಕೊಂಡು ಕುಳಿತುಬಿಟ್ಟಿದ್ದಾರೆ. "ನನ್ನೆದುರಿಗೆ ೪೦ ವರ್ಷ ವಯಸ್ಸಾದರೂ ಒಂದು ಎದುರು ಮಾತನಾಡಿದವಳಲ್ಲ. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದವಳಲ್ಲ. ದುಷ್ಟರ ಕಂಡು ದೂರ ಇರು ಎಂಬಂತೆ ಇದ್ದವಳು. ಈಗ ನಮ್ಮ ನಡುವೆ ಒಂದು ಫೋಟೋವಾಗಿ ಹೋಗಿದ್ದಾಳೆ ಎಂದು ನಂಬಲೇ ಆಗುತ್ತಿಲ್ಲ. ಒಂದು ಬ್ಲೌಸ್ ಪೀಸ್ ತೆಗೆದುಕೊಳ್ಳಲೂ, ’ನೀನೇ ಬಂದು ಆರಿಸಿಕೊಡು, ಅಕ್ಕಯ್ಯ’ ಅನ್ನುತ್ತಿದ್ದಳು. ಅದೆಷ್ಟು ಜನ ಆಳುಗಳಿಗೆ ದಿನವೆಲ್ಲ ಅಡುಗೆ ಮಾಡಿ ಹಾಕಿ ಸೋತು ಹೋದಳು. ಈಗ ಸುಖವಾಗಿ ಹೊಸ ಮನೆ ಕಟ್ಟಿಸಿಕೊಂಡು ಮಕ್ಕಳನ್ನು ಓದಿಸಿಕೊಂಡು ಗಂಡನಿಗೆ ತೋಟದ ಕೆಲಸದಲ್ಲಿ ಸಹಾಯ ಹಸ್ತ ನೀಡುತ್ತಿದ್ದವಳು... ದೇವರು ಅನ್ಯಾಯ ಮಾಡಿದ. ಅವಳಿಗೆ ದಶಕದ ಕಷ್ಟಕೊಟ್ಟು ಎರಡು ವರ್ಷ ಸುಖವಾಗಿರಲು ಬಿಡಲಿಲ್ಲ"ಎಂದು ಕಣ್ಣೀರು ಹರಿಸುತ್ತಿದ್ದಾರೆ.
’ಅದು ಸರಿ. ಇವೆಲ್ಲ ಹೇಗಾಯ್ತು?’ ಇದು ಎಲ್ಲರ ಪ್ರಶ್ನೆ.
ಅಂದು ಜನವರಿ ೫, ದೊಡ್ಡವಳಾದ ಸಿಂಧುವಿನ ಹುಟ್ಟಿದಬ್ಬ. ಹಿಂದಿನ ದಿನವಷ್ಟೆ ಚಿಕ್ಕವಳಾದ ಬಿಂದುವಿನ ಹುಟ್ಟಿದಬ್ಬ. ಇದರ ಪ್ರಯುಕ್ತ ಗುಬ್ಬಿ ತಾಲ್ಲೂಕಿನ ಬೆಟ್ಟದಹಳ್ಳಿ ದೇವಸ್ಥಾನಕ್ಕೆಂದು ಬೆಳಿಗ್ಗೆ ಹೋದವರು, ಬೈಕಿನಲ್ಲಿ ಹಿಂದಿರುಗುವಾಗ ರಸ್ತೆ ಉಬ್ಬೊಂದರಲ್ಲಿ ಕುಕ್ಕಿದಂತಾಗಿ ಬೈಕಿನಿಂದ ಕೆಳಗೆ ಬಿದ್ದವಳ ತಲೆಗೆ ಪೆಟ್ಟು ಬಿದ್ದು ಕಿವಿ, ಮೂಗಿನಲ್ಲಿ ರಕ್ತಸ್ರಾವವಾಗ ತೊಡಗಿತ್ತು. ತಕ್ಷಣ ತುಮಕೂರಿಗೆ ಕರೆದು ತಂದರೂ ಅಲ್ಲಿ ’ಬೆಂಗಳೂರಿನ ನಿಮ್ಹಾನ್ಸ್ ಗೆ ಹೋಗುವುದು ಒಳ್ಳೆಯದು’ ಎಂದು ಹೇಳಿದರು. ಅಲ್ಲಿಗೆ ಹೋದಾಗ ಪರಿಚಯದ ನರ್ಸ್ ಸುರೇಶ್ ಅಲ್ಲಿದ್ದು ಚಿಕಿತ್ಸೆಗೆ ಸಹಾಯ ಮಾಡಿದರು. ಮಿದುಳಿನಲ್ಲಿ ಕೊಂಚ ರಕ್ತ ಸ್ರಾವ ಹಾಗೂ ಮಿದುಳಿನ ಊತವಿರುವುದರಿಂದ ಔಷಧಿಗಳ ಮೂಲಕ ಹುಷಾರಾಗುತ್ತಾರೆ. "ನೀವು ಯಾವುದೇ ಸರ್ಕಾರಿ ಆಸ್ಪತ್ರೆಗೆ ಹೋಗಿ ಅಬ್ಸರ್ವೇಶನ್‍ನಲ್ಲಿ ಇಟ್ಟರೂ ಸಾಕು" ಎಂದು ಹೇಳಿದ ನಂತರ ಆಕೆಯ ಕಾಲರ್ ಮೂಳೆ ಕೂಡ ಮುರಿದದ್ದರಿಂದ ಒಳ್ಳೆಯ ಚಿಕಿತ್ಸೆ ಸಿಗಲೆಂದು ಸೆಂಟ್ ಜಾನ್ಸ್ ಗೆ ಕರೆದೊಯ್ದೆವು. ಅಲ್ಲಿ ಮೂಳೆಯದೇನೂ ಮುಖ್ಯವಲ್ಲ ಮಿದುಳಿನ ಬಗ್ಗೆ ನಾವು ಸೀರಿಯಸ್ಸಾಗಬೇಕೆಂದರು. ಸರಿ ವಾಪಸ್ಸು ನಾವು ನಿಮ್ಹಾನ್ಸ್ ಗೆ ಬಂದು ಅಲ್ಲಿನ ಡಾಕ್ಟರ‍್ಗಳ ಕೈಲಿ "ಯಾಕೆ ಪ್ರೈವೇಟ್ ಆಸ್ಪತ್ರೆಗೆ ಹೋದ್ರಿ?" ಎಂದು ಬೈಸಿಕೊಂಡೆವು. ಆದರೂ ಇಲ್ಲಿಯೇ ಪೂರ್ತಿ ಗುಣಮಾಡಿ ಎಂದು ಗೋಗರೆದು ಅಲ್ಲಿ ಅಡ್ಮಿಟ್ ಮಾಡಿದೆವು. ಮಾರನೆಯ ದಿನವೆಲ್ಲ ಸ್ನಾನ, ತಿಂಡಿ, ಹಣ್ಣಿನ ರಸ ಕುಡಿದಳಾದರೂ ಯಾವುದನ್ನೂ ದಕ್ಕಿಸಿಕೊಳ್ಳಲಾಗಲಿಲ್ಲ. ಆದರೂ ಬಂದವರನ್ನೆಲ್ಲ ಚೆನ್ನಾಗಿ ಗುರುತಿಸಿ ಮಾತನಾಡುವುದನ್ನು ನೋಡಿ, ಎಲ್ಲರೂ ಆಕೆ ಹುಷಾರಾದಳೆಂದು ನಿಟ್ಟುಸಿರು ಬಿಟ್ಟರು.
ಆದರೆ ಎಲ್ಲ ಅನುಭವಸ್ಥರ ನುಡಿ ಒಂದೇ, "ಮಿದುಳಿನ ಏಟು ಇಷ್ಟೇ ಅಂತ ಹೇಳೋಕ್ಕಾಗಲ್ಲ"
ಅಂದು ಸಂಜೆಯೇ ಆಕೆಗೆ ಫಿಟ್ಸ್ ಬಂದಂತಾಗಿ ರಕ್ತಸ್ರಾವ ಹೆಚ್ಚಿದೆ ಎಂದು ಸ್ಕ್ಯಾನ್ ಮಾಡಿ ಆಕೆಗೆ ಒಂದು ಸರ್ಜರಿಯ ಅವಶ್ಯಕತೆಯಿದೆಯೆಂದು ಹೇಳಲಾಯಿತು.
ಆಕೆಯ ಮಿದುಳು ಊತ ಹೆಚ್ಚಿರುವುದರಿಂದ ಅದಕ್ಕೆ ಜಾಗ ಮಾಡಿಕೊಡಲು ತಲೆ ಬುರುಡೆಯ ಮೂಳೆಯನ್ನು ಕತ್ತರಿಸಿ ಅದನ್ನು ಹೊಟ್ಟೆಯಲ್ಲಿ ಸುರಕ್ಷಿತವಾಗಿಟ್ಟು, ಆರು ತಿಂಗಳ ನಂತರ ಅವರು ಸಂಪೂರ್ಣ ಗುಣ ಹೊಂದಿದ ಮೇಲೆ ಮತ್ತೆ ಮೂಳೆಯನ್ನು ಅದೇ ಜಾಗಕ್ಕೆ ಮತ್ತೆ ಕೂರಿಸಲಾಗುವುದು ಎಂದು ಹೇಳಿದರು. ಅದನ್ನು ಕ್ರೆನೋಟಮಿ ಅನ್ನುತ್ತಾರೆ ಅಂದ ನೆನಪು. ಸುಮಾರು ೩ ಗಂಟೆಗಳಕಾಲ ನಡೆದ ಈ ಶಸ್ತ್ರ ಚಿಕಿತ್ಸೆ ಯಶಸ್ವಿಯಾಯಿತೆಂದೂ, ಆಕೆಗೆ ಕೃತಕ ಉಸಿರಾಟದ ಅವಶ್ಯಕತೆಯೂ ಬೀಳಲಿಲ್ಲವೆಂದೂ ಡಾಕ್ಟರ‍್ಗಳು ಹೇಳಿದರು.ಸಂಜೆ ೭ಕ್ಕೆ ಶುರುವಾಗಿ ೧೦ಕ್ಕೆ ಮುಗಿಯಿತು ಆ ಶಸ್ತ್ರ ಚಿಕಿತ್ಸೆ.
ಆದರೆ ನಮಗಾಶ್ಚರ್ಯವಾಗುವಂತೆ ಆಕೆ ಬೆಳಿಗ್ಗೆಯೇ ಚೇತರಿಸಿಕೊಂಡಿದ್ದಳು. ೯ನೇ ತಾರೀಕು ಜನವರಿ, ಆಕೆ ಇಡ್ಲಿ ಕೇಳಿ ಒಂದು ಇಡ್ಲಿ ತಿಂದಳು. ಮಧ್ಯಾಹ್ನ ಆಕೆ ಎಂದೂ ಕುಡಿಯದಷ್ಟು ದೊಡ್ಡ ಲೋಟದಲ್ಲಿ ಗಂಜಿ ಕುಡಿದಳು. ಸಂಜೆ ೪.೩೦ಯ ವೇಳೆಗೆ ’ಕುತ್ತಿಗೆ ನೋವು, ನವಿ’ ಎಂದು ಒದ್ದಾಡುತ್ತಿದ್ದಳು. ನರ್ಸ್ ಮತ್ತು ಡಾಕ್ಟರ್‍ಗಳು ಸರ್ಜರಿಯ ನಂತರ ಅದು ಸಹಜ restlessness ಎಂದರು.೬.೩೦ ಸಂಜೆ ಒಬ್ಬ ಡಾಕ್ಟರ್ ಬಂದು ಮಾತನಾಡಿಸಿ ಹೋದರು. ಆಕೆ ಗುಣವಾಗುತ್ತಾಳೆ. ಇನ್ನು ವಾರ್ಡ್‍ಗೆ ಸ್ಥಳಾಂತರಿಸಬಹುದು. ಎಂದು ಹೇಳಿ ಎಲ್ಲರನ್ನೂ ಸಂತೋಷಗೊಳಿಸಿದ. ೭.೩೦ಯಷ್ಟರಲ್ಲಿ ಹಲವು ಡಾಕ್ಟರ‍್ಗಳು ಆಕೆಯನ್ನು ಸುತ್ತಿರುವುದು ಕಾಣಿಸಿತು. ನನಗೆ ಕಂಡರೂ ನಾನು ತಣ್ಣಗಿದ್ದೆ. ಅಮ್ಮನಿಗೆ ಹೇಳಿದೆ, ಯಾಕೋ ನಿರ್ಮಲನಿಗೆ ಏನೋ ಆದಂತಿದೆ. ಅಲ್ಲಿ ಕ್ಲೀನ್ ಮಾಡುತ್ತಿದ್ದ ಹೆಂಗಸು ’ಹೃದಯದ ಬಡಿತ ನಿಂತಿತ್ತಂತೆ. ಅದಕ್ಕೆ ನೋಡ್ತಾ ಇದ್ದಾರೆ’ ಅಂದರು.
ಅಲ್ಲಿಂದ ಮುಂದೆ ಬರೀ ಆತಂಕದ ಕ್ಷಣಗಳು. ಅಲ್ಲಿಂದ ಮುಂದಕ್ಕೆ ನನ್ನಕ್ಕ ತಾನಾಗಿಯೇ ಏನೂ ಮಾಡಲಿಲ್ಲ. ಮಾತನಾಡಲಿಲ್ಲ. ಇನ್ನು ೩೬ಗಂಟೆ ಕೃತಕ ಸಹಾಯ ಬದುಕಷ್ಟೆ.
’ಆಕೆಗೆ ಯಾಕೆ ಈ ರೀತಿ ಆಯಿತೆಂದು ಗೊತ್ತಾಗುತ್ತಿಲ್ಲ. ಆಹಾರವೇನಾದರೂ ಶಾಸಕೋಶಕ್ಕೆ ಹೋಯಿತಾ? ಹೆಪ್ಪುಗಟ್ಟಿದ ರಕ್ತವೇನಾದರೂ ಹೃದಯಕ್ಕೆ ಮಿದುಳಿನ ಕಡೆಯಿಂದ ಮುಂದುವರೆದು ತೊಂದರೆ ಕೊಟ್ಟಿತಾ? ಆಕೆಯನ್ನು ಪರೀಕ್ಷಿಸೋಣವೆಂದರೆ ಆಕೆಯ ಉಸಿರಾಟ, ರಕ್ತದೊತ್ತಡ, ಎಲ್ಲವೂ ಕೃತಕವಾಗಿವೆ. ಇಲ್ಲಿಂದ ಆಕೆಯನ್ನು ಚಲಿಸಲೂ ಆಗುವುದಿಲ್ಲ’ ಎಂಬ ಮಾತುಗಳೇ ಕೇಳಿದವು.
ಜನವರಿ ೧೦ರಂದು "No improvements. ಹಾಗೇ ಇದ್ದಾರೆ" ಎಂಬುದನ್ನೇ ದಿನವೆಲ್ಲ ಕೇಳಿದೆವು.
ಜ್ಯೋತಿಷಿಗಳೆಲ್ಲ ಆಕೆಗೆ ೭೦ ವರ್ಷ ಆಯಸ್ಸಿದೆ. ಆಕೆಯ ಪ್ರಾಣಕ್ಕೆ ಏನೂ ಆಗುವುದಿಲ್ಲ. ಬರೀ ದೇವರ ಜಪ ಮಾಡಿ ಎಂದರು.
ವೈದ್ಯರೆಲ್ಲ ಆಗಲೇ "ಆಕೆಯ ಸ್ಥಿತಿ ಆಶಾದಾಯಕವಾಗೇನೂ ಇಲ್ಲ. ಆಸೆಯನ್ನು ಬಿಡಿ ಎನ್ನುತ್ತಿದ್ದರು"
ಹಿರಿಯವೈದ್ಯರು, "ಆಕೆಗೆ ಹೀಗಾಗಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಚೇತರಿಸಿಕೊಂಡಿದ್ದಳು. ಈಗ ನಾವು ದೇವರಿಂದ ಪವಾಡವನ್ನು ಮಾತ್ರ ನಿರೀಕ್ಷಿಸಬಹುದು" ಎಂದು ಹೇಳತೊಡಗಿದರು.
ಕಿರಿಯ ವೈದ್ಯನೊಬ್ಬನನ್ನು "ಈಗ ನಿರ್ಮಲ ಹೇಗಿದ್ದಾಳೆ?..." ಎಂದು ಮಾತು ಮುಗಿಸುವ ಮೊದಲೇ, "What do you want to know? Senior doctors told you everything na? She is going to die any moment. THAT'S ALL" ಎಂದ. ಆತನ ಹತಾಶೆ ಅರ್ಥವಾಗುತ್ತಿತ್ತು. ತಾನು ಕಲಿತ ವಿದ್ಯೆಯೆಲ್ಲಾ ಬಳಸಿಯೂ ಆತ ಏನೂ ಮಾಡಲಾಗದವನಾಗಿದ್ದ. ಸಮಾಧಾನವನ್ನೂ.
ರಾತ್ರಿಯೆಲ್ಲ ಆಕೆಯೊಳಕ್ಕೆ, ಹೊರಕ್ಕೆ ಹಲವು ವೈರುಗಳು, ಪೈಪುಗಳು, ದ್ರವಗಳು... ಎಲ್ಲ ಕೃತಕ.
In case of emergency?
ಯಾವ ವೈದ್ಯರೂ ಅಲ್ಲಿರಲಿಲ್ಲ.
ಒಬ್ಬರನ್ನು ಅಲ್ಲಿಯೇ ಇರಲು ಕೇಳಿಕೊಂಡಾಗ, "ಇಲ್ಲಿ ಹಲವು ತುರ್ತು ಕೇಸುಗಳು ಬರುತ್ತಲೇ ಇರುತ್ತವೆ. ನಾನು ಇಲ್ಲಿರಲೇ ಬೇಕು.ಅಕಸ್ಮಾತ್ ಏನಾದರೂ ಇದ್ದರೆ ಅಲ್ಲಿಂದ ಕಾಲ್ ಬರುತ್ತದೆ. ಅಲ್ಲಿಗೆ ಆಗ ಬರುತ್ತೇವೆ." ಎಂದರು. ಅಪಘಾತಕ್ಕೊಳಗಾಗಿ ತಲೆಯಿಂದ ರಕ್ತ ಸೋರುತ್ತಿರುವವರು ರಾತ್ರಿಯೆಲ್ಲಾ ಒಳಬರುತ್ತಲೇ ಇದ್ದರು... ಎಂದಿನಂತೆ.
ಬೆಳಗಿನ ಜಾವ ೪.೩೦, ಜನವರಿ ೧೧, ನರ್ಸ್ ಕೇಳಿದೆ. "ಬಿಪಿ ಏನಾದರೂ ಉತ್ತಮವಾಯಿತೇ?" "ಇಲ್ಲ ಬದಲಿಗೆ ಆಕೆಗೆ ಮತ್ತೆ ಮೂರು ಬಾರಿ ಹೃದಯ ಸ್ತಂಭನವಾಯಿತು. ವೈದ್ಯರು revive ಮಾಡಿದ್ದಾರೆ. ಅವರ ಮಕ್ಕಳನ್ನು ಕರೆಸಿಬಿಡಿ." ನಾನು ಆಕೆಯ ಕೈಗಳನ್ನು ಒತ್ತಿ ಅವು ಬೆಚ್ಚಗಿರುವುದನ್ನು ಖಾತರಿ ಪಡಿಸಿಕೊಂಡು, ಮಕ್ಕಳನ್ನು ಕರೆದುಕೊಂಡುಬರಲು ಊರಿನ ಬಸ್ ಹತ್ತಿದೆ. ಆಕೆಯ ಹಣೆಯಲ್ಲಿ ದೇವಸ್ಥಾನದಿಂದ ಬಂದ ಕುಂಕುಮವಿತ್ತು. ಇನ್ನೊಬ್ಬ ಜ್ಯೋತಿಷಿಯ ವಿಭೂತಿ ಇದ್ದವು.
ನಾನು ಗುಬ್ಬಿಯನ್ನು ತಲುಪಿದಾಗ ೮.೩೦ ಆಗಿತ್ತು.
ಇದ್ದುದರಲ್ಲಿ ಧೈರ್ಯವಾಗಿರುವಂತೆ ಕಂಡಿದ್ದ ನನಗೆ ನರ್ಸ್ ಸುರೇಶ್ ಹೇಳಿದರು. "ಅಕ್ಕ ಹೋಗಿಬಿಟ್ರು."